200 ಕೋಟಿ ಮೌಲ್ಯದ ಜಮೀನು ಅಕ್ರಮ ಪರಭಾರೆ, ಪ್ರಭಾವಿ ಸಚಿವರ
ಹಿತರಕ್ಷಣೆ,
ಕನ್ನಡಪ್ರಭ ವಾರ್ತೆ
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಭೂಮಿ
ಮಾರಾಟ ವಿವಾದದ ತನಿಖೆಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೊಟ್ಟಿರುವ ಸೂಚನೆಯನ್ನು ಮುಖ್ಯಮಂತ್ರಿ
ಸಿದ್ದರಾಮಯ್ಯ ಪಕ್ಕಕ್ಕಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿರುವ ಅರಸು ಅವರ ಕನಸಿನ “ಶ್ರೀ ಶಕ್ತಿ ’
ಬಂಗಲೆಯನ್ನೊಳಗೊಂಡ ಸುಮಾರು ರು. 200 ಕೋಟಿ ಮೌಲ್ಯದ
ಜಮೀನು ಮಾರಾಟ ಹಗರಣ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿರುವುದು ವಿವಾದ
ಸೃಷ್ಟಿಸಿದೆ .
ಅರಸು ಅವರನ್ನು ಮಾದರಿಯಾಗಿಟ್ಟುಕೊಂಡು ಸಿದ್ದರಾಮಯ್ಯ
ಆಡಳಿತ ನಡೆಸಲು ಮುಂದಾಗಿದ್ದಾರೆ. ಆದರೆ, ಅದೇ ಅರಸು ಅವರ ಆಸ್ತಿ ಮಾರಾಟ
ವಿಚಾರದಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಮೀನಾಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಅವರ ಸಂಪುಟದ
ಸಚಿವರೊಬ್ಬರ ಪ್ರಭಾವ ಕಾರಣ. ಮಾರಾಟದ ಹಿಂದೆ ನಡೆದಿರುವ ಅಕ್ರಮಗಳು ಆರ್‌ಟಿಐ ಕಾರ್ಯಕರ್ತರೊಬ್ಬರ
ಹೋರಾಟದಿಂದ ಬೆಳಕಿಗೆ ಬಂದಿದೆ.
ವಿವಾದ ಏಕೆ ?: ಆರ್‌ಟಿಐ
ಕಾರ್ಯಕರ್ತ ಸಂಗ್ರಹಿಸಿದ ದಾಖಲೆ ಪ್ರಕಾರ, ಈ ನಾಲ್ಕು ನಿವೇಶನಗಳು ಅರಸು
ಅವರ ಅವರ ಕುಟುಂಬ ವರ್ಗಕ್ಕೆ ಮಂಜೂರಾಗಿದ್ದೇ ನಿಯಮ ಬಾಹಿರ. 1972ರಿಂದ 80 ರವರೆಗೆ ಮುಖ್ಯಮಂತ್ರಿಯಾಗಿದ್ದ ಅರಸು ಅದಾಗಲೇ ಬೆಂಗಳೂರಿನ ಸಂಪಿಗೆ ರಸ್ತೆ ಹಾಗೂ
ಮಾರ್ಗೋಸಾ ರಸ್ತೆಯಲ್ಲಿ ನಿವೇಶನ ಹೊಂದಿದ್ದರು.
ಅಂದಿನ ಸಿಐಟಿಬಿ ನಿಯಮ ಪ್ರಕಾರ ಒಬ್ಬ ವ್ಯಕ್ತಿ ನಿವೇಶನ
ಹೊಂದಿದ್ದರೆ ಆತನ ಕುಟುಂಬ ವರ್ಗದವರಿಗೆ ಮತ್ತೆ ನಿವೇಶನ ಕೊಡುವುದು ಅಸಾಧ್ಯ. ಎಲ್ಲದಕ್ಕಿಂತ
ಮುಖ್ಯವಾಗಿ ಅರಸು ಅವರಾಗಲಿ ಅವರ ಪತ್ನಿ ಚಿಕ್ಕಮ್ಮಣ್ಣಿ ಅವರಾಗಲಿ, ನಿವೇಶನ ಕೋರಿ
ಅರ್ಜಿ ಸಲ್ಲಿಸಿರಲಿಲ್ಲ. ಆದರೂ ಪ್ರಭಾವ ಬಳಸಿ ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ ಎಂಬುದು
ದೂರುದಾರರ ವಾದ. ಹೀಗಾಗಿ ಸರ್ಕಾರಿ ಒಡೆತನಕ್ಕೆ ಸೇರಿದ ಈ ಆಸ್ತಿಯನ್ನು ವಶಪಡಿಸಿಕೊಂಡು, ಆ ಜಾಗದಲ್ಲಿ ವಿದ್ಯಾರ್ಥಿ ನಿಲಯ, ಉನ್ನತ ಶೈಕ್ಷಣಿಕ ತರಬೇತಿ
ಕೇಂದ್ರ, ದೇವರಾಜ ಅರಸು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸುವ
ಮೂಲಕ ಅರಸು ಹೆಸರನ್ನು ಚಿರಸ್ಥಾಯಿಗೊಳಿಸಬೇಕು. ಜತೆಗೆ ಈ ಆಸ್ತಿಯನ್ನು ಭೂ ಮಾಫಿಯಾದಿಂದ
ಮುಕ್ತಗೊಳಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕಚೇರಿಗೆ ಪತ್ರ
ಬರೆದು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ಆಗ್ರಹಿಸಿದ್ದರು.
ರಾಜ್ಯಕ್ಕೆ ಸೂಚನಾ ಪತ್ರ: ಇದನ್ನು ಗಂಭೀರವಾಗಿ
ಪರಿಗಣಿಸಿದ ಪ್ರಧಾನಿ ಕಾರ್ಯಾಲಯ 12-2-2013 ರಂದು (ಪತ್ರ ಸಂಖ್ಯೆ : 7/3/2013-ಪಿಎಂಪಿ4/22169) ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಗೆ ಪತ್ರ
ಬರೆದು ತನಿಖೆಗೆ ಸೂಚಿಸಿತ್ತು.
ಇದರ ಆಧಾರದ ಮೇಲೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜನಸ್ಪಂದನ
ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಅವರ ಮೂಲಕ ಬಿಡಿಎಗೆ ಪತ್ರ ಬರೆದು (ಪತ್ರ ಸಂಖ್ಯೆ ಸಿಆಸುಇ : 101:ಪಿಓಎಸ್/ಸಿ:2013 ) ಈ ವಿವಾದಾಸ್ಪದ ನಿವೇಶನಗಳ ಮೌಲ್ಯ ರು. 200
ಕೋಟಿಗೂ ಹೆಚ್ಚಾಗಿರುವುದರಿಂದ ನಿವೇಶನ ಹಂಚಿಕೆಯಲ್ಲಿ ಆಗಿರುವ ನಿಯಮ ಬಾಹಿರ
ಪ್ರಕ್ರಿಯೆ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು.
ಇದರ ಆಧಾರದ ಮೇಲೆ ಅಧ್ಯಯನ ನಡೆಸಿದ ಬಿಡಿಎ, ಸದರಿ
ನಿವೇಶನಗಳು ಮೂರು ದಶಕಗಳಿಗಿಂತಲೂ ಹಿಂದೆ ಹಂಚಿಕೆಯಾಗಿದೆ. ಅವುಗಳ
ಮೊತ್ತ, ನೊಂದಾಯಿತ ಕ್ರಯಪತ್ರಗಳ ಮೂಲಕ ಹಕ್ಕು
ವರ್ಗಾವಣೆಯಾಗಬಹುದಾಗಿದೆ. ಅಂತ ಹಂಚಿಕೆ ಹಾಗೂ ಅಕ್ರಮವನ್ನು ನೇರವಾಗಿ ಲೋಕಾಯುಕ್ತ ತನಿಖೆಗೆ
ಒಪ್ಪಿಸಲು ಸಾಧ್ಯವಿಲ್ಲ. ಆದರೂ ಪ್ರಕರಣದ ತೀವ್ರತೆ ಮನಗಂಡು ಲೋಕಾಯುಕ್ತ ತನಿಖೆಗೆ ಒಪ್ಪಿಸಬಹುದು
ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮೇ 20, 2013ರಂದು
ವರದಿ ಸಲ್ಲಿಸಿತ್ತು.
ಸಿಎಂ ಕಚೇರಿಗೆ: ಪ್ರಕರಣ ತೀರಾ ಸಂಕೀರ್ಣವಾಗಿರುವುದರ
ಜತೆಗೆ ವಿವಾದಿತ ಆಸ್ತಿ ಮಾರಾಟವಾಗಿದ್ದರಿಂದ ಕ್ರಮ ತೆಗೆದುಕೊಳ್ಳಲು ಅಳುಕುತ್ತಿರುವ ಅಧಿಕಾರಿಗಳು
50 ಪುಟಗಳ ವರದಿ ತಯಾರಿಸಿ ಈ ಬಗ್ಗೆ ನೀವೇ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು
ಮುಖ್ಯಮಂತ್ರಿ ಕಚೇರಿಗೆ ಕಡತ ಸಲ್ಲಿಸಿದ್ದಾರೆ. ಆದರೆ ಸಿದ್ದರಾಮಯ್ಯ ಇದುವರೆಗೆ ಕ್ರಮ
ತೆಗೆದುಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಿ ರಿಪೋರ್ಟ್?
ಅರಸು ಆಸ್ತಿ ಪರಭಾರೆ ಪ್ರಕ್ರಿಯೆ ಪ್ರಶ್ನಿಸಿದ್ದ ತಮಗೆ, ಶ್ಯಾಮನೂರು
ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ರೌಡಿ ಬೆತ್ತನಗೆರೆ ಶೀನನ ಶಿಷ್ಯ ರಮೇಶ್ ಹಾಗೂ
ಸಹಚರರ ಮೂಲಕ ಪ್ರಾಣ ಬೆದರಿಕೆ ಹಾಕಿದ್ದರು ಎಂದು ಆರ್‌ಟಿಐ ಕಾರ್ಯಕರ್ತ ಸದಾಶಿವನಗರ ಪೊಲೀಸ್
ಠಾಣೆಯಲ್ಲಿ 17-1-2013ರಂದು ದೂರು ಸಲ್ಲಿಸಿದ್ದರು. ಇದಕ್ಕೆ ಪ್ರತಿ
ದೂರು ದಾಖಲಾಗಿತ್ತು. ಆದರೆ ಈ ಎರಡು ದೂರುಗಳ ಮೇಲೆ ಬಿ.ರಿಪೋರ್ಟ್ ಸಲ್ಲಿಸಲು ಸರ್ಕಾರ ಮುಂದಾಗಿದೆ.
ಈ ಮೂಲಕ ಅರಸು ಆಸ್ತಿ ಮಾರಾಟ ಪ್ರಕ್ರಿಯೆಗೆ ಬೆಂಬಲ ನೀಡಿದೆ.
ಏನಿದು ಪ್ರಕರಣ ?
ಬೆಂಗಳೂರಿನ ಸದಾಶಿವನಗರದ ಆರ್‌ಎಂವಿ ಬಡಾವಣೆ 8ನೇ
ಮುಖ್ಯರಸ್ತೆ 1ನೇ ಕ್ರಾಸ್‌ನಲ್ಲಿರುವ ಸರ್ವೆ ನಂ 10,11,14 ಮತ್ತು 15ರಲ್ಲಿ 130-85
ವಿಸ್ತೀರ್ಣದ ನಾಲ್ಕು ನಿವೇಶನಗಳಿವೆ. ಇದರ ಒಟ್ಟು ವಿಸ್ತೀರ್ಣ 1 ಎಕರೆ 1 ಗುಂಟೆ. ನಗರದ ಆಯಕಟ್ಟಿನ ಸ್ಥಳದಲ್ಲಿರುವ ಈ ಜಾಗದ ಮೌಲ್ಯ ರು. 200 ಕೋಟಿಗೂ ಅಧಿಕ. ಇದು ದೇವರಾಜ ಅರಸು ಅವರಿಗೆ ಸೇರಿದ್ದು, ತಮ್ಮ
ಕುಟುಂಬ ವರ್ಗದವರಾದ ಚಂದ್ರಪ್ರಭ, ಮೆ.ಗೋಲ್ಡ್‌ಫೀಲ್ಡ್‌ಹೌಸ್, ಲೀಲಮ್ಮ ಶಿವನಂಜಪ್ಪ, ನಾಗರತ್ನ ಕೇರ್ ಆಫ್ ಎಂ.ಡಿ.ನಟರಾಜ್
ಅವರಿಗೆ 1973ರಿಂದ 1983ರ ಅವಧಿಯಲ್ಲಿ ಅಂದಿನ
ಸಿಐಟಿಬಿ (ಇಂದಿನ ಬಿಡಿಎ) ಮೂಲಕ ಸ್ವಾಧೀನಪತ್ರ ನೀಡಲಾಗಿತ್ತು. ಈ ಜಾಗದಲ್ಲೇ 'ಶ್ರೀಶಕ್ತಿ' ಬಂಗಲೆ ನಿರ್ಮಿಸಲಾಗಿದೆ. ಬಂಗಲೆ ಸೇರಿದಂತೆ
ನಿವೇಶನ ಸಂಖ್ಯೆ 10ನ್ನು ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬ
ವರ್ಗ 2012ರ ಆಗಸ್ಟ್ ತಿಂಗಳಲ್ಲಿ ಖರೀದಿಸಿದೆ. ಶ್ಯಾಮನೂರು ಅವರ ಪುತ್ರ
ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಹೆಸರಿನಲ್ಲಿ ಖರೀದಿ
ಪ್ರಕ್ರಿಯೆ ನಡೆದಿದ್ದು, ರು. 30 ಕೋಟಿ
ಮೌಲ್ಯದ ಆಸ್ತಿಯನ್ನು ರು. 18.5 ಕೋಟಿಗೆ ಮಾರಾಟ ಮಾಡಲಾಗಿದೆ.
ಶ್ಯಾಮನೂರು ಶಿವಶಂಕರಪ್ಪ ಅವರಿಂದ ಪಡೆದಿದ್ದ ಸಾಲ ತೀರಿಸಲಾಗದೇ ಈ ಆಸ್ತಿಯನ್ನು ಅವರಿಗೇ ಮಾರಾಟ
ಮಾಡಿದ್ದಾರೆ ಎನ್ನಲಾಗಿದೆ.
No comments:
Post a Comment