ಕ.ಪ್ರ.ವಾರ್ತೆ , ಬೆಂಗಳೂರು , ಜು. 3ಹಿಂದಿನ ಬಿಜೆಪಿ ಸರ್ಕಾರವನ್ನೇ ಅಲುಗಾಡಿಸಿದ್ದ ಡಿನೋಟಿಫಿಕೇಷನ್ ಕರ್ಮಕಾಂಡಕ್ಕೆ ಬಿಡಿಎ ಮತ್ತೆ 'ಕೈ' ಹಾಕಿದೆ.ಬಹುನಿರೀಕ್ಷಿತ ಅರ್ಕಾವತಿ ಬಡಾವಣೆ ನಿರ್ಮಿಸಲು ಸ್ವಾಧೀನ ಮಾಡಿಕೊಂಡಿದ್ದ ಜಮೀನನ್ನು ಡಿನೋಟಿಫೈ ಮಾಡಿ, ಜಮೀನು ನೀಡಿದ್ದ ಮಾಲೀಕರಿಗೇ ವಾಪಸ್ ನೀಡಲಾಗಿದೆ. ಹೊಸ ಸರ್ಕಾರ ಬರುತ್ತಿದ್ದಂತೆ ಬಿಡಿಎ ಈ 'ಘನಕಾರ್ಯ' ಶುರು ಮಾಡಿದ್ದು, ಮೇ 10ರಿಂದ ಈವರೆಗೂ 423 ಎಕರೆ ಜಮೀನನ್ನು ಡಿನೋಟಿಫೈ ಮಾಡಿದೆ.ಆದರೆ, ಇದನ್ನು ಅಧಿಕೃತವಾಗಿ ಡಿನೋಟಿಫಿಕೇಷನ್ ಎನ್ನಲು ಸಾಧ್ಯವಿಲ್ಲ. ಆದರೆ, ಡಿನೋಟಿಫಿಕೇಷನ್ ಮೂಲಕ ಈಡೇರುತ್ತಿದ್ದ ಉದ್ದೇಶವನ್ನು ಇಲ್ಲಿ ಅನ್ಯ ದಾರಿಯಿಂದ ಸಾಧಿಸಲಾಗಿದೆ. ಅಂದರೆ, ಡಿನೋಟಿಫಿಕೇಷನ್ ಮಾಡಲು ಅನುಸರಿಸಬೇಕಾದ ನಿಯಮಗಳನ್ನು ಬಿಟ್ಟು ಜಮೀನುಗಳ ಮಾಲೀಕರಿಗೆ ಎನ್‌ಒಸಿ ನೀಡುತ್ತಿದೆ.ಸ್ವಾಧೀನಗೊಂಡಿದ್ದ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆದಿಂದ ಹೊರತುಪಡಿಸಲಾಗಿದೆ ಎಂದು ಜಮೀನು ಮಾಲೀಕರಿಗೆ ಹಿಂಬರಹ ಪತ್ರ ನೀಡುತ್ತಿದೆ. ಈ ಮೂಲಕ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜಮೀನುಗಳನ್ನು 10 ವರ್ಷಗಳ ಹಿಂದೆ ಪಡೆದಿದ್ದ ಕಡಿಮೆ ದರಕ್ಕೆ ಜಮೀನು ಮಾಲೀಕರಿಗೆ ಹಿಂತಿರುಗಿಸಲಾಗುತ್ತಿದೆ.ಹೀಗಾಗಿ ಇದು 'ಅಳಿಯ ಅಲ್ಲ ಮಗಳ ಗಂಡ' ಎನ್ನುವಂತೆ ಅನಧಿಕೃತ ಡಿನೋಟಿಫಿಕೇಷನ್ನೇ ಆಗಿದೆ ಎನ್ನುತ್ತಾರೆ ಅಧಿಕಾರಿಗಳು.ರಿಯಲ್ ದಂಧೆ ಆರಂಭ: ಬಿಡಿಎದಿಂದ ಜಮೀನು ಪಾಪಸ್ ಪಡೆಯುವವರ ಹಿಂದೆ ಈಗ ಮಧ್ಯವರ್ತಿಗಳು ಠಳಾಯಿಸುತ್ತಿದ್ದು, ಜಮೀನುಗಳನ್ನು ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡಿಸುತ್ತಿದ್ದಾರೆ. ಇದೊಂದು ರೀತಿ ಕಡಿಮೆ ಬೆಲೆಯ ಜಮೀನಿಗೆ ದರ ಹೆಚ್ಚಿಸಿಕೊಟ್ಟಂತಾಗಿದ್ದು, ರಿಯಲ್ ಎಸ್ಟೇಟ್ ದಂಧೆಯನ್ನು ಪುಷ್ಟೀಕರಿಸಿದಂತಾಗುತ್ತಿದೆ.ಬಿಡಿಎ ಹೇಳುವ ಕಥೆ: ಈ ಬಗ್ಗೆ ಕೇಳಿದರೆ ಬಿಡಿಎ ಹೇಳುವ ಕಥೆಯೇ ಬೇರೆ. ಬಿಡಿಎ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳು ಹಸಿರುಪಟ್ಟಿ ವಲಯದಲ್ಲಿದ್ದರೆ, ಕಟ್ಟಡಗಳಿಂದ ಆವೃತವಾಗಿದ್ದರೆ, ನರ್ಸರಿ, ಕಾರ್ಖಾನೆಗಳಿದ್ದರೆ, ದತ್ತಿ, ಶೈಕ್ಷಣಿಕ ಅಥವಾ ಧಾರ್ಮಿಕ ಸಂಸ್ಥೆಗಳ ಕಟ್ಟಡಗಳಿಂದ ಕೂಡಿದ್ದರೆ ಅವುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ 6 ಮಾರ್ಗಸೂಚಿಗಳನ್ನು ನೀಡಿತ್ತು. ಆ ತೀರ್ಪಿನಂತೆ ವಿಶೇಷ ಭೂ ಸ್ವಾಧೀನಾಧಿಕಾರಿ ಕೆಲವು ಭೂ ಮಾಲೀಕರಿಗೆ ಜಮೀನು ಹಿಂತಿರುಗಿಸುವಂತೆ ಸೂಚಿಸಿದ್ದಾರೆ.ಇದನ್ನು ಬಿಡಿಎ ಪ್ರಶ್ನಿಸುವಂತಿಲ್ಲ. ಹೀಗಾಗಿ ಅವರ ಜಮೀನುಗಳನ್ನು ಸ್ವಾಧೀನದಿಂದ ಕೈಬಿಟ್ಟು ಎನ್‌ಒಸಿ ನೀಡಲಾಗುತ್ತಿದೆ ಎನ್ನುತ್ತಾರೆ ಬಿಡಿಎ ಆಡಳಿತಾಧಿಕಾರಿಗಳು.ಡಿನೋಟಿಫೈಗಾಗಿ ನಕಲಿ ಕಾರಣಈಗ ಸ್ವಾಧೀನದಿಂದ ಕೈಬಿಟ್ಟಿರುವ ಬಹುತೇಕ ಜಮೀನುಗಳು 6 ಮಾರ್ಗಸೂಚಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಅವನ್ನು ಹಿಂತಿರುಗಿಸಲಾಗಿದೆ. ಏಕೆಂದರೆ, ಈ ಹಿಂದೆ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಡಲಾಗದು ಎಂದು ಬಿಡಿಎ ವಾದಿಸಿತ್ತು. ಆದರೆ, ವಿಶೇಷ ಭೂ ಸ್ವಾಧೀನಾಧಿಕಾರಿ ಹೆಸರಿನಲ್ಲಿ ಜಮೀನು ಹಿಂತಿರುಗಿಸಿ ಕೋಟ್ಯಂತರ ನಷ್ಟ ತಂದುಕೊಳ್ಳುತ್ತಿದೆ.ಇದರಿಂದ ಅರ್ಕಾವತಿ ಬಡಾವಣೆಯಲ್ಲಿ 20 ಸಾವಿರ ನಿವೇಶನ ಹಂಚಿಕೆ ಮಾಡಲು ಬಿಡಿಎಗೆ ಜಮೀನು ಕೊರತೆ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ, ಈಗ ಬಿಡಿಎ 8000 ನಿವೇಶನ ಹಂಚಿಕೆ ಮಾಡಿದ್ದು, ಅವುಗಳಲ್ಲಿ 800 ನಿವೇಶನಗಳನ್ನು ರದ್ದು ಮಾಡಿದೆ. ಹೀಗಾಗಿ ಬಿಡಿಎ ಇನ್ನೂ 13000 ನಿವೇಶನಗಳನ್ನು ಹಂಚಿಕೆ ಮಾಡಬೇಕಿದ್ದು, ಅವುಗಳಿಗೆ ಜಮೀನು ಇಲ್ಲದೆ ಪರದಾಡುವಂತಾಗಿದೆ. ಅಲ್ಲದೆ, ಈಗಾಗಲೇ ನಿವೇಶನ ಪಡೆದಿರುವವರು ಡೀನೋಟಿಫಿಕೇಷನ್ ಭೀತಿ ಎದುರಿಸುತ್ತಿದ್ದಾರೆ.ಆಯುಕ್ತರು ಏಕೆ ನೀಡುತ್ತಿದ್ದಾರೆ?: ನಿಜಕ್ಕೂ ಬಿಡಿಎ ಭೂ ಮಾಲೀಕರಿಗೆ ಜಮೀನು ವಾಪಸ್ ನೀಡಬೇಕಾದ ಅನಿವಾರ್ಯವಿದ್ದರೆ ಆ ಕೆಲಸವನ್ನು ಬಿಡಿಎ ಭೂ ಸ್ವಾಧೀನಾಧಿಕಾರಿ ಮಾಡಬೇಕಿತ್ತು. ಅದೂ ಬಿಡಿಎ ಉಪ ಆಯುಕ್ತರ ಅನುಮತಿ ಪಡೆದು ಪ್ರಕ್ರಿಯೆಗಳನ್ನು ಪೂರೈಸಬೇಕಿತ್ತು. ಆದರೆ, ಇಲ್ಲಿ ಆಯುಕ್ತರೇ ಎನ್‌ಒಸಿ ನೀಡುತ್ತಿದ್ದು, ಅದನ್ನು ಸರ್ಕಾರ ಗಮನಕ್ಕೆ ತರುತ್ತಿಲ್ಲ ಎನ್ನಲಾಗಿದೆ.ಅರ್ಕಾವತಿ ಏನು ನಿಮ್ಮ ಕಥೆಅರ್ಕಾವತಿ ಬಡಾವಣೆ ಕುರಿತು 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಬಿದ್ದಿದೆ. ನಂತರ 2004ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಗೊಂಡಿತ್ತು. ಅದರ ಪ್ರಕಾರ ಸುಮಾರು 16 ಗ್ರಾಮಗಳಲ್ಲಿ 2750 ಎಕರೆ ರೈತರ ಜಮೀನುಗಳನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ಅನೇಕ ಭೂ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನ್ಯಾಯಾಲಯ ಯಾವೆಲ್ಲಾ ಜಮೀನುಗಳು ಭೂ ಸ್ವಾಧೀನದಿಂದ ಹೊರಗಿರಬೇಕೆಂದು 2005ರ ನ.25ರಂದು 6 ಮಾರ್ಗಸೂಚಿಗಳನ್ನು ನೀಡಿತ್ತು. ಬಿಡಿಎ ಈ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿಯೂ ಇದೇ ತೀರ್ಪು ಹೊರಬಿತ್ತು. ಆದರೂ ವಿಚಾರ ಇತ್ಯಾರ್ಥವಾಗದೆ ವಿಶೇಷ ಭೂ ಸ್ವಾಧೀನಾಧಿಕಾರಿ ನೇಮಿಸಲಾಗಿತ್ತು. 6 ಮಾರ್ಗಸೂಚಿಯಡಿ ಬರುವ ಜಮೀನುಗಳನ್ನು ಗುರುತಿಸಿದರು. ಆದರೆ ಬಹುತೇಕ ಮಂದಿ ತಪ್ಪು ಮಾಹಿತಿ ನೀಡಿ ಎನ್‌ಒಸಿ ಪಡೆದರು ಎನ್ನಲಾಗಿದೆ.ಎನ್‌ಒಸಿಯನ್ನು ನಾನು ಮತ್ತು ಭೂ ಸ್ವಾಧೀನಾಧಿಕಾರಿಗಳು ನೀಡಬೇಕು. ಆದರೆ, ಆ ಸಂದರ್ಭದಲ್ಲಿ ನಾನು ಚುನಾವಣಾ ಆಯೋಗದ ಕರ್ತವ್ಯದಲ್ಲಿದ್ದರಿಂದ ಆಯುಕ್ತರೇ ನೀಡಿದ್ದಾರೆ. ಏಕೆಂದರೆ ಹೈಕೋರ್ಟ್ ಆದೇಶವಿದ್ದರಿಂದ ತುರ್ತಾಗಿ ನೀಡಬೇಕಿತ್ತು. ಆದ್ದರಿಂದ ಹೀಗಾಗಿದೆ.- ವಸಂತಕುಮಾರ್, ಬಿಡಿಎ ಉಪ ಆಯುಕ್ತ
No comments:
Post a Comment