Friday, May 9, 2014

ENCROACHMENT OF RAJA KALUVE AND CLEARING/REMOVING THE ENCROACHMENTS IN BANGALORE - A NEWS REPORT

A NEWS REPORT IN KANNADA PRABHA REGARDING THE ENCROACHMENT OF RAJA KALUVE OR VANISHING DRAINS IN BANGALORE

ರಾಜಾ ಒತ್ತುವರಿ ತೆರವೆಂದು?

600 ಕಿ.ಮೀ. ರಾಜಾಕಾಲುವೆಯಲ್ಲಿ ಉಳಿದಿರುವುದು 350ಕಿ.ಮೀ. ಮಾತ್ರ


ಬೆಂಗಳೂರು: ಮಹಾನಗರದ ಮರಗಳು, ಕೆರೆಗಳಿಗೆ ಜೀವ ಜಲ ನೀಡುವ ರಾಜಾಕಾಲುವೆಗಳೇ ಈಗ ಜೀವಂತ ಸಮಾಧಿಯಾಗುತ್ತಿವೆ. ನಗರದಲ್ಲಿದ್ದ 600 ಕಿ.ಮೀ. ರಾಜಾಕಾಲುವೆಯಲ್ಲಿ ಈಗ 350ಕಿ.ಮೀ. ಮಾತ್ರ ಉಳಿದಿದೆ.
ನಗರದಲ್ಲಿ ಬರೋಬ್ಬರಿ 250 ಕಿ.ಮೀ. ಉದ್ದದ ಕಾಲುವೆ ಒತ್ತುವರಿಗೆ ತುತ್ತಾಗಿದೆ. ಅಪಾರ್ಟ್‌ಮೆಂಟ್‌ಗಳು,  ಮನೆಗಳು, ವ್ಯಾಪಾರ ಮಳಿಗೆಗಳು ಇವುಗಳನ್ನು ನುಂಗಿ ಹಾಕಿವೆ. ಹೀಗಾಗಿ ನಗರಲ್ಲಿ ಮಳೆ ಬಂತೆಂದರೆ  ಸಾಕು ಕಾಲುವೆಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಗಳು, ಮನೆಗಳಿಗೆ ನುಗ್ಗುತ್ತದೆ.
ಇದನ್ನು ತಪ್ಪಿಸಲು ನಗರ ಜಿಲ್ಲಾಧಿಕಾರಿಗಳು ರಾಜಾಕಾಲುವೆ ಒತ್ತುವರಿ ತೆರವು ಸರ್ವೆ ನಡೆಸಿ ಬಿಬಿಎಂಪಿಗೆ ವರದಿಯನ್ನೂ ನೀಡಿದ್ದಾರೆ. ಒತ್ತುವರಿ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಬಿಬಿಎಂಪಿ ಮಾತ್ರ ವರದಿಯ ಪೂರ್ಣ ವಿವರವೇ ಬಂದಿಲ್ಲ ಎಂದು ಕಥೆ ಹೇಳುತ್ತಿದೆ. ಅಷ್ಟೇ ಏಕೆ ? ಒತ್ತುವರಿ ತೆರವು ಮಾಡುವಲ್ಲಿ ಬಿಬಿಎಂಪಿಗಿಂತ ಜಿಲ್ಲಾಧಿಕಾರಿಯೇ ಹೆಚ್ಚು ಸಮರ್ಥರು ಎಂದು ಸಬೂಬು ಸಹ ಹೇಳುತ್ತಿದೆ. ಹೀಗಾಗಿ ಯಾವ ಸಂಸ್ಥೆಯೂ ತೆರವು ಕಾರ್ಯಕ್ಕೆ ಮುಂದಾಗಿಲ್ಲ.
ಅಲಕ್ಷಿಸಿದರೆ ಅಪಾಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ ನಗರದಲ್ಲಿ ಸಹಸ್ರಾರು ಮರಗಳು ನಾಶವಾಗಿವೆ. 265 ಕೆರೆಗಳು ಮಾಯವಾಗಿವೆ. ಮರಗಳು ಮತ್ತು ಕೆರೆಗಳನ್ನು ಬದುಕುಳಿಸುವುದೇ ರಾಜಕಾಲುವೆಗಳು. ಅಂದರೆ ಮಳೆ  ನೀರು ರಾಜಾಕಾಲುವೆಗಳ ಮೂಲಕ ಕೆರೆ ಸೇರುತ್ತಿತ್ತು. ಒತ್ತುವರಿಯಾಗಿರುವುದರಿಂದ ರಾಜಾಕಾಲುವೆಯಲ್ಲಿ ನೀರು ಬರುವುದೇ ಕಡಿಮೆಯಾಗಿ ಬೇರೆ ತಗ್ಗು ಪ್ರದೇಶಕ್ಕೆ ನುಗ್ಗಲಾರಂಭಿಸಿತು. ಇದರಿಂದಾಗಿ ಕೆರೆಗಳು ಬತ್ತಿದವು. ಹಾಗೆಯೇ ಭೂಗಳ್ಳರಿಂದ ಒತ್ತುವರಿಯಾದವು.
ಹೀಗಾಗಿ ನಗರದಲ್ಲಿ 265ಕೆರೆಗಳ ಪೈಕಿ ಬರೀ 96 ಕೆರೆಗಳಷ್ಟೇ ಉಳಿದಿವೆ. ಬಿಬಿಎಂಪಿ ಈಗಲಾದರೂ ಒತ್ತುವರಿ ತೆರವುಗೊಳಿಸದಿದ್ದರೆ ಕೆಲವೇ ವರ್ಷಗಳಲ್ಲಿ ರಾಜಾಕಾಲವೆಯನ್ನು ಹುಡುಕಬೇಕಾಗುತ್ತದೆ.
ಜವಾಬ್ದಾರಿಯಿಂದ ಜಾರಿಕೆ ತಂತ್ರ: ನಗರದಲ್ಲಿ ರಾಜಾಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂಬ ಕೂಗು ಎದ್ದಾಗ ಕೆಲವು ಪಾಲಿಕೆ ಸದಸ್ಯರಷ್ಟೇ ಅದಕ್ಕೆ ದನಿ ಗೂಡಿಸಿದರು. ಆದರೆ ಶಾಸಕ ಬಿ.ಎನ್.ವಿಜಯಕುಮಾರ್ ಕೆಲವು ಸೇವಾ ಸಂಸ್ಥೆಗಳ ಜತೆಗೂಡಿ ರಾಜಾಕಾಲುವೆ ಒತ್ತುವರಿ ಸರ್ವೆ ಮಾಡುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡು 8ಕ್ಕೂ ಹೆಚ್ಚು ಸಭೆಗಳು, ಸಮಾಲೋಚನೆಗಳು ನಡೆದವು. ಸರ್ವೆ ಕಾರ್ಯ ಮುಗಿದು ಈಗ ವರದಿಯೂ ಸಲ್ಲಿಕೆಯಾಗಿದೆ.
251 ಹಳ್ಳಿಗಳ ಮೂಲಕ ಹಾದು ಹೋಗಿದ್ದ ರಾಜಾಕಾಲುವೆ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಒತ್ತುವರಿಯಾಗಿತ್ತು. 231 ಹಳ್ಳಿಗಳಲ್ಲಿ ಒತ್ತುವರಿ ನಡೆದಿದೆ. ಈ ಬಗ್ಗೆ ಬಿಬಿಎಂಪಿ ಬಳಿ ಸಮಗ್ರ ವರದಿಯೇ ಇದೆ. ಆದರೆ ಇದನ್ನಾಧರಿಸಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಅನಂತಸ್ವಾಮಿ ಒತ್ತುವರಿ ತೆರವು ಕಾರ್ಯ ನಡೆಸುತ್ತಿಲ್ಲ.
ವರದಿ ಸಲ್ಲಿಸಿ 6 ತಿಂಗಳೇ ಆಗಿದ್ದರೂ ಅವರು ಈತಕ ಕಾರ್ಯಾರಂಭ ಮಾಡಿಲ್ಲ ಎಂದು ನಗರ ಜಿಲ್ಲೆ ಭೂ ದಾಖಲೆಗಳ ಅಧಿಕಾರಿಗಳು ದೂರಿದ್ದಾರೆ. ಆದರೆ ಬಿಬಿಎಂಪಿಯ ಅನಂತಸ್ವಾಮಿ, ಕಾಲವೆ ಒತ್ತುವರಿ ಮಾಡಿರುವ ಸರ್ವೆಯ ಪೂರ್ಣ ವರದಿಯೇ ಸಿಕ್ಕಿಲ್ಲ ಎನ್ನುತ್ತಾರೆ.

-ಬಿಬಿಎಂಪಿಗೆ ಶಾಸಕರ ಗಡುವು
ರಾಜಕಾಲುವೆ ಒತ್ತುವರಿ ಸರ್ವೆ ನಡೆಸುವುದಕ್ಕಾಗಿ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದೇನೆ. ಅದೀಗ ಫಲ ನೀಡಿದೆ. ಜಿಲ್ಲಾಧಿಕಾರಿ ನೀಡಿರುವ ಸರ್ವೆ ವರದಿ ಆಧರಿಸಿ ಒತ್ತುವರಿ ತೆರವುಗೊಳಿಸದಿದ್ದರೆ ನಾನೇ ಬಿಬಿಎಂಪಿ ಮುಂದೆ ಧರಣಿ ನಡೆಸುತ್ತೇನೆ ಎಂದು ಶಾಸಕ ಬಿ.ಎನ್.ವಿಜಯಕುಮಾರ್ ಹೇಳಿದ್ದಾರೆ. ಇಷ್ಟೂ ದಿನ ಸರ್ವೆ ವರದಿ ಬರಲಿ ಎನ್ನುತ್ತಿದ್ದ ರಾಜಕಾಲುವೆ ಮುಖ್ಯ ಎಂಜಿನಿಯರ್ ಅನಂತಸ್ವಾಮಿ ಈಗ ವರದಿ ಸಿಕ್ಕಿಲ್ಲ, ಪೂರ್ಣ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಮೇ 16ರ ರವರೆಗೂ ಗಡುವು ನೀಡುತ್ತೇನೆ. ಆ ನಂತರವೂ ಅವರು ಕಾರ್ಯೋನ್ಮುಖರಾಗದಿದ್ದರೆ ಸೇವಾ ಸಂಸ್ಥೆಗಳು ಜತೆಗೂಡಿ ಅನಿರ್ಧಿಷ್ಟ ಅವಧಿ ಧರಣಿ ನಡೆಸುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.

ರಾಜಾಕಾಲುವೆ ಒತ್ತುವರಿ ಸಮೀಕ್ಷೆ ಸಮಗ್ರ ಮಾಹಿತಿಯನ್ನು ನಕ್ಷೆ ಸಹಿತ ಬಿಬಿಎಂಪಿಗೆ ಮತ್ತು ಎಂಜಿನಿಯರ್ ವಿಭಾಗಕ್ಕೆ ನೀಡಲಾಗಿದೆ. ಅದನ್ನಾಧರಿಸಿ ಬಿಬಿಎಂಪಿ ತೆರವು ಮಾಡಬೇಕಿತ್ತು. ಆದರೆ ಇನ್ನೂ ತೆರವು ಮಾಡಿಲ್ಲ.
-ಡಾ.ಜಿ.ಸಿ.ಪ್ರಕಾಶ್, ನಗರ ಜಿಲ್ಲಾಧಿಕಾರಿ
ರಾಜಕಾಲುವೆ ಒತ್ತುವರಿ ಸರ್ವೆ ಮತ್ತು ತೆರವುಗೊಳಿಸುವುದೆಲ್ಲಾ ನಗರ ಜಿಲ್ಲಾಧಿಕಾರಿ ಅವರ ವ್ಯಾಪ್ತಿಗೆ ಬರುತ್ತದೆ. ಅವರಿಗೇ ಹೆಚ್ಚಿನ ಅಧಿಕಾರವಿದೆ. ನಮಗೆ ನಗರ ಜಿಲ್ಲಾಧಿಕಾರಿಯಿಂದ ಇನ್ನೂ ಸರ್ವೆ ವರದಿ ಪೂರ್ಣ ವಿವರ ಸಿಕ್ಕಿಲ್ಲ.
-ಮುಖ್ಯ ಎಂಜಿನಿಯರ್, ಬಿಬಿಎಂಪಿ ರಾಜಕಾಲುವೆ ವಿಭಾಗ

No comments:

BBMP-Planning to regularise(convert) B Katha to A Katha

The BBMP has sent a proposal to the State Government of Karnataka to regularise (convert) B katha properties (vacant properties-without an...